ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ (Bengaluru Bulls)11ನೇ ಆವೃತ್ತಿ ಪ್ರೋ ಕಬಡ್ಡಿ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿದೆ. ಮಂಗಳವಾರ ನಡೆದ ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 36-57 ಅಂಕಗಳಿಂದ ಯುಪಿ ಯೋಧಾಸ್ ವಿರುದ್ಧ ಸೋಲು ಕಂಡಿತು. ಈ ಮೂಲಕ ಬೆಂಗಳೂರು ಪ್ರಸಕ್ತ ಆವೃತ್ತಿಯಲ್ಲಿ ಆಡಿರುವ ಮೂರು ಪಂದ್ಯಗಳಲ್ಲೂ ಆಘಾತ ಅನುಭವಿಸಿದೆ.
ಯುಪಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ.
ಬೆಂಗಳೂರು ತಂಡದ ನ್ಯೂನತೆ ಅರಿತು ಆಡಿದ ಯುಪಿ ಯೋಧಾಸ್ ಮೊದಲಾವಧಿಯಿಂದಭರ್ಜರಿ ಪ್ರದರ್ಶನ ನೀಡಿತು. ಈ ಅವಧಿಯಲ್ಲಿ ಯು.ಪಿ ದಾಳಿಯ ಮೂಲಕ ಹೆಚ್ಚಿನ ಅಂಕವನ್ನು ಕಲೆ ಹಾಕಿತು. ಮೊದಲ 20 ನಿಮಿಷದ ಆಟದಲ್ಲಿ ಯು.ಪಿ 33-15 ಅಂಕಗಳಿಂದ ಮುನ್ನಡೆ ಸಾಧಿಸಿತು. ಈ ವೇಳೆ ಬೆಂಗಳೂರು ಬುಲ್ಸ್ 2 ಬಾರಿ ಅಂಕಣವನ್ನು ಖಾಲಿ ಮಾಡಿತು.
ಕಳಪೆ ಟ್ಯಾಕಲ್
ಎರಡನೇ ಅವಧಿಯ ಆಟದಲ್ಲೂ ಬೆಂಗಳೂರು ಬುಲ್ಸ್ (Bengaluru Bulls)ಅಂಕಗಳ ಬೇಟೆಯನ್ನು ನಡೆಸಿತು. ಆದರೆ ಮೊದಲಾವಧಿಯಲ್ಲಿ ಸಾಧಿಸಿದ ಅಂಕಗಳ ಅಂತರವನ್ನು ಮ್ಯಾಚ್ ಮಾಡಲು ಆಗಲಿಲ್ಲ. ಈ ಅವಧಿಯಲ್ಲಿ ಬೆಂಗಳೂರು 21-24 ಅಂಕಗಳ ಹಿನ್ನಡೆ ಕಂಡಿತು. ಮೂರನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ (Bengaluru Bulls)ತಂಡದ ಟ್ಯಾಕಲ್ ಸಾಧಾರಣವಾಗಿತ್ತು. ಯುಪಿ ಯೋಧಾಸ್ ದಾಳಿ ಹಾಗೂ ಟ್ಯಾಕಲ್‌ನಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡಿ ಭರ್ಜರಿ ಜಯ ಸಾಧಿಸಿತು. ಈ ವೇಳೆಯೂ ಬೆಂಗಳೂರು ಮತ್ತೊಮ್ಮೆ ಆಲೌಟ್ ಆಯಿತು.
ಸುರೇಂದ್ರ ಬೆಂಕಿ ಆಟ
ಪಂದ್ಯದಲ್ಲಿ ಉಭಯ ತಂಡಗಳು ತಲಾ 42 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿದವು. ಈ ವೇಳೆ ಬುಲ್ಸ್ ದಾಳಿಯಲ್ಲಿ 22 ಬಾರಿ ಅಂಕಗಳನ್ನು ಬಾಚಿಕೊಳ್ಳುವಲ್ಲಿ ಯಶಸ್ವಿಯಾಯಿತು. ಯು.ಪಿ 24 ಬಾರಿ ಎದುರಾಳಿ ಆಟಗಾರರನ್ನು ಔಟ್ ಮಾಡುವಲ್ಲಿ ಸಫಲವಾಯಿತು. ಆದರೆ ಯುಪಿ ಮಲ್ಟಿಪಲ್ ರೇಡ್ ಪಾಯಿಂಟ್‌ಗಳನ್ನು ತಂದಿದ್ದು, ಬೆಂಗಳೂರಿಗೆ ಹಿನ್ನಡೆಯಾಯಿತು. ಟ್ಯಾಕಲ್‌ನಲ್ಲಿ ಬುಲ್ಸ್ ಆಟ ಮಂಕಾಗಿತ್ತು.
ಬೆಂಗಳೂರು ಬುಲ್ಸ್ ತಂಡದ ಪರ ಪ್ರದೀಪ್ ನರ್ವಾಲ್ 16, ಜತೀನ್ 9 ಅಂಕ ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು. ವಿಜೇತ ತಂಡದ ಪರ ಸುರೇಂದ್ರ ಗಿಲ್ 17, ಭರತ್ 14 ಅಂಕವನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು.