ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್(Mohammed Siraj) ತೆಲಂಗಾಣ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಡಿಎಸ್ಪಿ) ಅಧಿಕಾರ ವಹಿಸಿಕೊಂಡಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಈ ವರ್ಷದ ಆರಂಭದಲ್ಲಿ ಟಿ20 ವಿಶ್ವಕಪ್ ಯಶಸ್ಸು ಸೇರಿದಂತೆ ಭಾರತ ತಂಡಕ್ಕೆ ಸಲ್ಲಿಸಿದ ಸೇವೆಗಾಗಿ ಸಿರಾಜ್ ಅವರಿಗೆ ಗ್ರೂಪ್-1 ಸರ್ಕಾರಿ ಹುದ್ದೆಯನ್ನು ನೀಡಲಾಗುವುದು ಎಂದು ಘೋಷಣೆ ಮಾಡಿದ್ದರು.
ತೆಲಂಗಾಣ ಪೊಲೀಸ್ ಇಲಾಖೆಯಲ್ಲಿ ಡಿಎಸ್‌ಪಿ ಹುದ್ದೆಯ ಜೊತೆಗೆ,ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನ ರಸ್ತೆ ಸಂಖ್ಯೆ 78 ರ ಬಳಿ ಸರ್ಕಾರವು 600 ಚದರ ಗಜಗಳಷ್ಟು ಭೂಮಿಯನ್ನು ಕೂಡ ಮಂಜೂರು ಮಾಡಿದೆ. ತೆಲಂಗಾಣದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಜಿತೇಂದರ್ ಅವರಿಗೆ ವರದಿ ಮಾಡುವ ಮೂಲಕ ಮೊಹಮ್ಮದ್ ಸಿರಾಜ್(Mohammed Siraj) ಡಿಎಸ್ಪಿ ಹುದ್ದೆಯನ್ನು ಅಲಂಕರಿಸಿದ್ದಾರೆ. ಈ ನೇಮಕದ ಬೆನ್ನಲ್ಲೇ ಸಿರಾಜ್(Mohammed Siraj) ಟೀಮ್ ಇಂಡಿಯಾವನ್ನು ತೊರೆಯಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಈಗ ಆರ್ಸಿಬಿ ತಂಡದ ಸ್ಟಾರ್ ವೇಗಿ ತೆಲಂಗಾಣ ಸರ್ಕಾರದ ಪೊಲೀಸ್ ಅಧಿಕಾರಿ ಆಗಿದ್ದಾರೆ. ಇವರ ಸಂಬಳ ತಿಂಗಳಿಗೆ 1,37,050 ರೂ. ಇದೆ. ಆದರೆ ಅವರು ಸದ್ಯಕ್ಕಂತು ಟೀಮ್ ಇಂಡಿಯಾವನ್ನು ತೊರೆಯುವ ಸಾಧ್ಯತೆಯಿಲ್ಲ. ಏಕೆಂದರೆ ಸಿರಾಜ್ಅವರಿಗೆ ನೀಡಲಾಗಿರುವುದು ಗೌರವಾನ್ವಿತ ಹುದ್ದೆ. ಈ ಹುದ್ದೆಯನ್ನು ಅವರು ಯಾವಾಗ ಬೇಕಿದ್ದರೂ ಅಲಂಕರಿಸಬಹುದು. ಅಂದರೆ ಟೀಮ್ ಇಂಡಿಯಾದಿಂದ ನಿವೃತ್ತರಾದ ಬಳಿಕ ಅವರು ಡಿಎಸ್ಪಿ ಆಗಿ ಕಾರ್ಯ ನಿರ್ವಹಿಸಬಹುದು.